ಬೆಳಗಾವಿ: 15 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ತಾಪ್ತ ಬಾಲಕರು ಸೇರಿದಂತೆ ಮೂರು ಜನ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ಬೆಳಗಾವಿ ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ನಡೆದಿದ್ದು, ಒಂದು ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಸಾಕೀಬ್ ಸೇರಿ ಒಬ್ಬ ಅಪ್ರಾಪ್ತ ಆರೋಪಿಯನ್ನ ಬಂದಿಸಲಾಗಿದ್ದು ಇನ್ನೋರ್ವ ಅಪ್ರಾಪ್ತ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇನ್ನೂ ತಲೆಮರೆಸಿಕೊಂಡಿರುವ ಆರೋಪಿ ಪೊಲೀಸ್ ಅಧಿಕಾರಿಯ ಪುತ್ರ ಎನ್ನಲಾಗಿದೆ.

ಬಾಲಕಿಯ ಸ್ನೇಹಿತನಾಗಿದ್ದ ಒಬ್ಬ ಅಪ್ರಾಪ್ತ ಆರೋಪಿಯು ಆಕೆಯನ್ನು ರೆಸಾರ್ಟ್‌ಗೆ ಕರೆತಂದಿದ್ದಾನೆ. ಸಾಕೀಬ್ ಈ ಮೊದಲೇ ರೆಸಾರ್ಟ್‌ನಲ್ಲಿ ರೂಮ್ ಬುಕ್ ಮಾಡಿದ್ದ. ಆಕೆಯನ್ನು ರೆಸಾರ್ಟ್‌ಗೆ ಕರೆತಂದ ನಂತರ, ಮೂವರು ಆರೋಪಿಗಳು ಸಾಮೂಹಿಕವಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕಿ ಮನೆಗೆ ವಾಪಾಸ್ ಆದಾಗ ಹೊಟ್ಟೆ ನೋವು ಎಂದಿದ್ದಾಳೆ. ಬಳಿಕ ಬಾಲಕಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮತ್ತೋರ್ವ ಆರೋಪಿ ಪೊಲೀಸ್ ಅಧಿಕಾರಿ ಪುತ್ರನಿಗಾಗಿ ಬಲೆ ಬೀಸಲಾಗಿದೆ.