ಹುಕ್ಕೇರಿ : ವಿದ್ಯಾರ್ಥಿಗಳು ಸತತ ಅಧ್ಯಯನ, ಪರಿಶ್ರಮದಿಂದ ಉನ್ನತ ಗುರಿ ತಲುಪಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು. ಶೇ.90 ಕ್ಕಿಂತ ಹೆಚ್ಚಿನ ಅಂಕ ಗಳಿಸುವ ಪತ್ರಕರ್ತರ ಮಕ್ಕಳಿಗೆ ತಮ್ಮ ಸಂಸ್ಥೆಯಿಂದ ಉಚಿತ ಶಿಕ್ಷಣ ಒದಗಿಸಲಾಗುವುದು ಎಂದು ಶ್ರೀ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿಹೊಳಿ ಭರವಸೆ ನೀಡಿದರು.

ಹುಕ್ಕೇರಿ ಪಟ್ಟಣದ ಹೊರವಲಯದ ಎಸ್.ಎಸ್. ಕನ್ವೆನ್ಷನ್ ಹಾಲ್ನಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ಗೋಕಾಕ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ಮತ್ತು ಕರ್ನಾಟಕ ಟೈಮ್ಸ್ ಕನ್ನಡ ದಿನಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳ ಸಾಧನೆಯ ಹಾದಿ ಅಷ್ಟು ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಅದೇ ರೀತಿ ನಾವು ಅಪೇಕ್ಷೆಪಟ್ಟಂತೆ ಫಲಿತಾಂಶವನ್ನು ಪಡೆಯಲು ಅತಿ ವೇಗವಾಗಿ ಸಾಧನೆಯ ಹಾದಿ ಯಲ್ಲಿ ಸಾಗಬೇಕಾಗಿದೆ ಎಂದವರು ಹೇಳಿದರು.
ಪ್ರತಿ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯವಾಗಿದೆ. ಇದೆಲ್ಲದರ ನಡುವೆ ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಮಾಡುವ ಕೆಲಸದಲ್ಲಿ ಶೃದ್ಧೆ ನಿಷ್ಠೆ ಮತ್ತು ನೈತಿಕ ಮೌಲ್ಯ ಹೊಂದಿರ ಬೇಕು. ಮರಳಿ ಯತ್ನವ ಮಾಡು ಎಂಬ ಮಾತಿ ನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಜೀವನದ ಸವಾಲ ನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದು ಸನತ್ ಜಾರಕಿಹೊಳಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆಪಿಸಿಸಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿರುವ ಪತ್ರಿಕಾರಂಗದಿಂದ ವಾಸ್ತವ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಪತ್ರಕರ್ತರು ಸತ್ಯ ಸಂಗತಿಗಳನ್ನು ಹೊರತರುವಲ್ಲಿ ನಿರ್ಭೀತೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಇಂದಿನ ದಿನಗಳಲ್ಲಿ ಪತ್ರಕರ್ತರು ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸಿ ಪ್ರಜಾಪ್ರಭುತ್ವ ಯಶಸ್ವಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ ಎಂದರು.

ವಾಲಿಬಾಲ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ನಮ್ಮ ಪತ್ರಕರ್ತರ ಸಂಘವು ನಮ್ಮ ಸಂಘದ ಸದಸ್ಯರಿಗೆ ಹಲವು ನೆರವು ನೀಡಿ ಸೈ ಎನಿಸಿಕೊಂಡಿದೆ ಮತ್ತು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಲಿಬಾಲ್ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸಂಘದಿಂದ ಸಕ್ರೀಯ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿಭಾ ಯಿಸಲಾಗಿದೆ. ಕೊರೋನಾ ಸೇರಿದಂತೆ ವಿವಿಧ ವಿಪತ್ತು ಕಾಲದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಾಗಿದ್ದು ಅವರ ಮಕ್ಕಳಿಗಾಗಿ ಕ್ರೀಡೆ, ಕಲೆ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಗಳನ್ನು ಪ್ರೋತಾಹಿಸಲಾಗುತ್ತಿದೆ. ಬರುವ ದಿನಗಳಲ್ಲಿ ಯುವ ಸಮೂಹಕ್ಕೆ ಕೌಶಲ್ಯ ಆಧಾರಿತ ಸ್ವಯಂ ಉದ್ಯೋಗ ಕೈಗೊಳ್ಳಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ವಾಲಿಬಾಲ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸರ್ವೋತ್ತಮ ಜಾರಕಿಹೊಳಿ, ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿ ಹೊಳಿ ಹಾಗೂ ಕೆಪಿಸಿಸಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಪತ್ರಕರ್ತರಾದ ಪುಂಡಲೀಕ ಬಾಳೋಜಿ, ಯಲ್ಲಪ್ಪ ತಳವಾರ, ಮಲ್ಲಿಕಾರ್ಜುನರೆಡ್ಡಿ ಗೊಂದಿ, ಪ್ರಸನ್ ಕುಲಕರ್ಣಿ, ಅರುಣ ಪಾಟೀಲ, ಬಿ.ಪ್ರಭಾಕರ, ಶಿವಾನಂದ ತಾರಿಹಾಳ, ಗೋಕಾಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಕೆ. ಪೂಜೇರಿ, ರವಿ ಕಾಂಬಳೆ, ಚೇತನ ಹೊಳೆಪ್ಪಗೋಳ, ಬಸವರಾಜ ಕೊಂಡಿ, ಮಹಾದೇವ ನಾಯಿಕ, ರಾಜು ಬಾಗಲಕೋಟೆ, ವಿಶ್ವನಾಥ ನಾಯಿಕ, ಬಿ.ಬಿ.ಕೋತೇಕರ, ಸಚೀನ ಖೋತ, ಸಚಿನ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
ನಿರೂಪಕಿ ನಮೀತಾ ಜೈನ್ ನಿರೂಪಿಸಿದರು. ಮಂಜು ಹುಡೇದ ಸ್ವಾಗತಿಸಿದರು. ಲೀಲಾವತಿ ರಜಪೂತ ಸ್ವಾಗತಗೀತೆ ಹಾಡಿದರು. ಇದೇ ವೇಳೆ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಜಿಲ್ಲೆಯ ಹಿರಿಯ ಪತ್ರಕರ್ತರು, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.