ಉಡುಪಿ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರ ಬಹುಕಾಲದ ಗೆಳೆಯ ಶ್ರೀಕಾಂತ್ ಜೋತೆ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ಚೈತ್ರಾ ತಂದೆ ಮದುವೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಲವು ಆರೋಗಳನ್ನ ಮಾಡಿದ್ದಾರೆ.
ಚೈತ್ರ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಕಳ್ಳ-ಕಳ್ಳಿ ಮದುವೆಯಾಗಿದ್ದಾರೆ. ಆಕೆ ನನ್ನನ್ನು ಕರೆದಿಲ್ಲ ನಾನು ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ, ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು.

ಬಿಗ್ ಬಾಸ್ ಕನ್ನಡ ಸೀಸನ್ 11ರʼ ಫೈರ್ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಮೇ 9 ರಂದು ಶ್ರೀಕಾಂತ್ ಕಶ್ಯಪ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗನ ಮದುವೆಯಾದ ಖುಷಿಯಲ್ಲಿರುವ ಚೈತ್ರಾ ಕುಂದಾಪುರ ಮೇಲೆ ಅವರ ತಂದೆಯೇ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ.

ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ. ಆಕೆಗೆ ಯಾರು ದೊಡ್ಡ ಸ್ಥಾನಮಾನ ಕೊಡಬೇಡಿ. ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ ಎಂದು ಬಾಲಕೃಷ್ಣ ನಾಯ್ಕ್, ಮಗಳು ಚೈತ್ರಾ ಕುಂದಾಪುರ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.
ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಹೆಮ್ಮೆಯ ವಿಷಯ. ಮೋಸದ ಹಣದಲ್ಲಿ ಆಕೆ ಕೊಟ್ಟು ಪ್ರಯೋಜನ ಏನು? ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರಾ ಪತಿ ನಮ್ಮ ಮನೆಯಲ್ಲಿ ಇದ್ದವ, ಅವನು ಕೂಡ ಕಳ್ಳ ಎಂದು ಬಾಲಕೃಷ್ಣ ನಾಯ್ಕ್ ಹೇಳಿದ್ದಾರೆ.

ನಾನು ಸತ್ಯ, ನ್ಯಾಯ, ಧರ್ಮದಲ್ಲಿರುವ ವ್ಯಕ್ತಿ. ನನ್ನ ದೊಡ್ಡ ಮಗಳು ಶಾಲೆ ಕೆಲಸ ಮಾಡಿಕೊಂಡು ಹೊಲಿಗೆ ಮಾಡಿಕೊಂಡು ಗೌರವಾನ್ವಿತ ರೀತಿಯಲ್ಲಿ ಬದುಕುತ್ತಿದ್ದಾಳೆ. ನನ್ನ ದೊಡ್ಡ ಮಗಳ ಮೇಲೆಯೂ ಚೈತ್ರಾ ಸುಳ್ಳು ಅಪವಾದ ಹಾಕಿದ್ದಳು. ಅವರಿಗೆ ಮಾನ ಮರ್ಯಾದೆ ಇಲ್ಲ. ನನ್ನ ಕುಟುಂಬದ ಮಾನ ಮರ್ಯಾದೆ ತೆಗೆದರು ಬಿಗ್ ಬಾಸ್ ವೇದಿಕೆಯಲ್ಲಿ ಎಲ್ಲಾ ಸತ್ಯ ಒಪ್ಪಿಕೊಳ್ಳಬಹುದಾಗಿತ್ತು. ನಾನೇ ಮನೆ ನಡೆಸುವವಳು ಎಂದು ಬಿಂಬಿಸಿಕೊಂಡಿದ್ದಾಳೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಈಕೆ ಹಣ ಹೊಡೆದಿರುತ್ತಾಳೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಪಡ್ಡೆ ಹುಡುಗರ ಹೆಸರಿನಲ್ಲೆಲ್ಲ ಡೆಪಾಸಿಟ್ ಮಾಡಿ ಬಾಂಡ್ ಮೇಲೆ ಸಾಲ ಪಡೆದಿದ್ದಳು. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ ಎಂದು ಬಾಲಕೃಷ್ಣ ನಾಯ್ಕ್ ಅವರು ಮಗಳ ಮೇಲೆ ಆರೋಪಿಸಿದ್ದಾರೆ.