ಬೆಳಗಾವಿ: ಸಿನಿಮೀಯ ರೀತಿಯಲ್ಲಿ ಕೈಯಲ್ಲಿ ಗನ್ ಹಿಡಿದು ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ಎಂಟ್ರಿ ಕೊಟ್ಟ ಗ್ಯಾಂಗ್, ಹಾಡಹಗಲೇ ಮನೆ ದೋಚಲು ವಿಫಲ ಯತ್ನ ನಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನಗರದ ಬುಡಾ ಕಚೇರಿ ಪಕ್ಕದಲ್ಲಿರುವ ಅಸೋದಾ ಸೊಸೈಟಿಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ್ ಪಠಾಣ್ ಅವರ ಮನೆಗೆ ನುಗ್ಗಿದ ಐವರು ದುಷ್ಕರ್ಮಿಗಳು ಮೈನುದಿನ್ ಅವರ ಪತ್ನಿ ಹಾಗೂ ಮಗಳ ತಲೆಗೆ ಗನ್ ಇಟ್ಟು ಬೆದರಿಸಿ ದರೋಡೆಗೆ ಯತ್ನಿಸಿದ್ದಾರೆ.
ಮಧ್ಯಾಹ್ನ ಮನೆಗೆ ನುಗ್ಗಿದ ಐವರು ದರೋಡೆಕೋರರಲ್ಲಿ ಮೂವರ ಬಳಿ ಗನ್ ಇತ್ತು. ಮನೆಗೆ ನುಗ್ಗುತ್ತಿದಂತೆಯೇ ಉದ್ಯಮಿಯ ಪತ್ನಿ ಹಾಗೂ ಮಗಳನ್ನು ಬಾತ್ ರೂಮ್ ನಲ್ಲಿ ಕೂಡಿ ಹಾಕಿದ್ದಾರೆ. ಈ ವೇಳೆ ಬಾತ್ ರೂಮ್ ನ ಗ್ಲಾಸ್ ಗಳನ್ನು ಕೆಳಗಡೆ ಎಸೆದು ಕೂಗಾಡಿದಾಗ ನೆರೆಮನೆಯವರು ಮನೆ ಕಡೆ ಬರಲು ಆರಂಭಿಸಿದ್ದಾರೆ. ಇದನ್ನು ನೋಡಿದ ದರೋಡೆಕೋರರು ಬರಿಗೈಯಲ್ಲಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರ ಪತ್ತೆಗೆ ಬೆಳಗಾವಿ ಪೊಲೀಸರು ಜಾಲ ಬೀಸಿದ್ದು, ಸ್ಥಳಕ್ಕೆ ಕ್ರೈಮ್ ಡಿಸಿಪಿ ನಿರಂಜನ್ ಅರಸ್, ಎಸಿಪಿ ಸದಾಶಿವ ಕಟ್ಟಿಮನಿ, ಮಾರ್ಕೆಟ್ ಮತ್ತು ಮಾಳಮಾರುತಿ ಪೊಲೀಸರು ಹಾಗೂ ಸೋಕೋ ತಂಡದಿಂದ ಪರಿಶೀಲನೆ ನಡೆಸಲಾಗಿದೆ.