ಬಳ್ಳಾರಿ: ಗೃಹಲಕ್ಷ್ಮಿ ಹಣವನ್ನ ನಾವು ಪ್ರತಿ ತಿಂಗಳೂ ಕೊಡ್ತೀವಿ ಅಂತ ಹೇಳಿಲ್ಲ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಉಲ್ಟಾ ಹೋಡೆದಿದ್ದಾರೆ
ಬಳ್ಳಾರಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತ ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನೋಡ್ರಿ ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು. ನಾವು ದುಡ್ಡು ಕೊಡ್ತಾ ಇರಬೇಕು. ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೇ ಹಣ ಬಂದುಬಿಡುತ್ತಾ.? ಒಂದರಿಂದ ಐದು ವರ್ಷ ಆಗುತ್ತೆ ಅಲ್ವಾ, ಅದೇ ರೀತಿ ಇದೂ ಕೂಡ ಬಂದಾಗ ಬರುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ ಹಾರಿಕೆ ಉತ್ತರ ನೀಡಿದ್ದಾರೆ.

ಕಾಂಗ್ರೆಸ್ ತನ್ನ ಗೃಹಲಕ್ಷ್ಮಿ ಯೋಜನೆಯ ಕುರಿತಾದ ಎಲ್ಲ ಪ್ರಕಟಣೆ ಹಾಗೂ ಜಾಹೀರಾತುಗಳಲ್ಲೂ ಪ್ರತಿ ತಿಂಗಳು 2000 ರೂ ಎಂದೇ ಬರೆದುಕೊಂಡಿದೆ. ಆದರೆ ಇದೀಗ ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ವಿಪಕ್ಷ ಟೀಕೆ ಕುರಿತು ಮಾತನಾಡಿದ ಅವರು, ನಾನೇನು ಹಂಪಿ ಟೂರ್ ಮಾಡೋಕೆ ಬಂದಿದ್ದೇನಾ? ಕುಮಾರಸ್ವಾಮಿ, ಅಶೋಕ್ಗೆ ಟೀಕೆ ಮಾಡದೇ ಇರೋಕೆ ಅಗುತ್ತಾ? ಎಂದು ತಿರುಗೇಟು ಕೊಟ್ಟಿದ್ದಾರೆ.